ಚಚನಾಮಾ-
ಚಾರಿತ್ರಿಕ ಅರಬ್ಬೀಗ್ರಂಥ. ಇದರ ಲೇಖಕ ಯಾರೆಂದು ತಿಳಿದಿಲ್ಲ. ಪೂರ್ಣ ಹೆಸರು ಚಚನಾಮಾ ಫತೇಹನಾಮಾ-ಇ-ಸಿಂಧ್. ಸಿಂಧ್ ಪ್ರದೇಶದ ಅಲೋರ ಪಟ್ಟಣದಲ್ಲಿ ನೆಲೆಸಿದ್ದ ಸಕಿಫೀ ಪಂಗಡದ ಕಾಜೀ ಮನೆತನದವನೊಬ್ಬ ಇದನ್ನು ರಚಿಸಿದನೆಂದು ಹೇಳಲಾಗುತ್ತದೆ. ಇದನ್ನು ಆ ಮನೆತನದವರು ಬಹು ಜೋಪಾನದಿಂದ ಕಾಪಾಡಿಕೊಂಡು ಬಂದರು. 1216ರಲ್ಲಿ ಮಹಮ್ಮದ್ ಆಲಿ ಇಬ್ನ್ ಹಮೀದ್ ಇಬ್ಬ್ ಅಬೂ ಬಕ್ರ್ ಕೂಫೀ ಎಂಬಾತ ಈ ಗ್ರಂಥವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ. 1900ರಲ್ಲಿ ಕರಾಚಿಯ ಮಿಜಾ ಕಲಿಚ್ ಬೇಗ್ ಫ್ರೆದೂನ ಬೇಗ್ ಎಂಬುವನು ಇದರ ಇಂಗ್ಲಿಷ್ ಭಾಷಾಂತರವನ್ನು ಪ್ರಕಟಿಸಿದ. ಅರಬರು ಸಿಂಧು ರಾಜ್ಯವನ್ನು ಆಕ್ರಮಿಸಿದ ಇತಿಹಾಸವನ್ನು ರಮೇಶಚಂದ್ರ ಮಜುಮದಾರರು ಚಚನಾಮಾ ಮತ್ತು ಇತರ ಅರಬ್ಬೀ ಗ್ರಂಥಗಳ ಆಧಾರದಿಂದ ಸಿದ್ಧಪಡಿಸಿ ಪ್ರಕಟಿಸಿದ್ದಾರೆ.

ಏಳನೆಯ ಶತಮಾನದಲ್ಲಿ ಸಿಂಧು ರಾಜ್ಯವನ್ನು ಆಳಿದ ಚಚರಾಜನ ಮತ್ತು ಅವನ ಮಗ ದಾಹರನ ಕಾಲದಲ್ಲಿ ಅರಬರು ಸಿಂಧು ರಾಜ್ಯವನ್ನು ಆಕ್ರಮಿಸಿಕೊಂಡ ಘಟನೆಯ ವಿವರ ಚಚನಾಮದಲ್ಲಿ ಸಿಗುತ್ತದೆ. ಈ ಘಟನೆಯ ಉಲ್ಲೇಖ ಇನ್ನೂ ಕೆಲವು ಅರಬ್ಬೀ ಗ್ರಂಥಗಳಲ್ಲಿ ದೊರೆಯುತ್ತದೆ. ಆದರೆ ಚಚನಾಮದಲ್ಲಿ ಮಾತ್ರ ಈ ಘಟನೆಯ ಎಲ್ಲ ವಿವರಗಳೂ ವರ್ಣಿತವಾಗಿವೆ. ಆದ್ದರಿಂದ ಭಾರತೀಯ ಇತಿಹಾಸದ ಆಕರಗ್ರಂಥಗಳಲ್ಲಿ ಚಚನಾಮಾಕ್ಕೆ ಮಹತ್ತ್ವದ ಸ್ಥಾನವಿದೆ.
ಸು. 6ನೆಯ ಶತಮಾನದಲ್ಲಿ ಸಿಂಧು ರಾಜ್ಯವನ್ನು ರಾಹಿರಾಸ ಎಂಬುವನು ಆಳುತ್ತಿದ್ದ. ಅವನ ಅನಂತರ ಚಚ ಎಂಬ ಬ್ರಾಹ್ಮಣ ಪಟ್ಟವನ್ನು ಆಕ್ರಮಿಸಿದ. ಚಚನ ಆನಂತರ ಆತನ ಮಗ ದಾಹರ ಪಟ್ಟಕ್ಕೆ ಬಂದ. ದಾಹರನ ಕಾಲದಲ್ಲಿ ಅರಬರಿಂದಾದ ದಾಳಿ ಅನಿರೀಕ್ಷಿತವಾದುದಾಗಲಿ ಮೊದಲನೆಯದಾಗಲಿ ಆಗಿರಲಿಲ್ಲ. ಅರಬರು ಸಿಂಧು ರಾಜ್ಯಕ್ಕೆ ಮೊದಲ ಬಾರಿಗೆ ದಾಳಿಯಿಟ್ಟದ್ದು 643ರ ಸುಮಾರಿಗೆ. ಆಗ ಸಿಂಧು ನದಿಯ ಮುಖದಲ್ಲಿದ್ದ ದೇಬಲ ಬಂದರಿಗೆ ಅವರು ತಮ್ಮ ನೌಕಾಬಲದಿಂದ ಮುತ್ತಿಗೆ ಹಾಕಿದರು. ಅಲ್ಲಿಯ ಪ್ರಾಂತ್ಯಾಧಿಕಾರಿ ಅರಬರನ್ನು ಪೂರ್ಣವಾಗಿ ಸೋಲಿಸಿದ. ಈ ಯುದ್ಧದಲ್ಲಿ ಅರಬರ ಸೇನಾಪತಿ ಮಡಿದ. ಮುಂದೆ 660ರ ಸುಮಾರಿಗೆ ಅರಬರು ಪುನಃ ಭೂಮಾರ್ಗವಾಗಿ ಬಂದು ಸಿಂಧು ರಾಜ್ಯದ ಕೀಕಾನ ಭಾಗಕ್ಕೆ ದಾಳಿಯಿಟ್ಟರು. ಆ ಸಲವೂ ಅವರು ತಮ್ಮ ಸೇನಾನಿಯನ್ನು ಬಲಿಕೊಟ್ಟರಲ್ಲದೆ ಕಟುವಾದ ಸೋಲನ್ನು ಅನುಭವಿಸಬೇಕಾಯಿತು. ಮುಂದೆ ಇಪ್ಪತ್ತು ವರ್ಷಗಳಲ್ಲಿ ಅರಬರು ಆರು ಸಲ ಸಿಂಧು ರಾಜ್ಯದ ಗಡಿಗಳಿಗೆ ದಾಳಿಯಿಟ್ಟರು. ಪ್ರತಿಸಲವೂ ಅವರಿಗೆ ಸೋಲೇ ಮೀಸಲಾಗಿತ್ತು. ಇದರಿಂದ ನಿರಾಶೆಗೊಂಡ ಅರಬರು ಈ ಯತ್ನವನ್ನೇ ಬಿಟ್ಟುಬಿಟ್ಟರು.

ಸು. 708ರಲ್ಲಿ ಸಿಂಹಳದಿಂದ ಇರಾಕಿಗೆ ಹೊರಟಿದ್ದ ಒಂದು ಹಡಗನ್ನು ಕಡಲುಗಳ್ಳರು ದೇಬಲದ ಹತ್ತಿರ ಹಿಡಿದುಕೊಂಡು, ಅದರಲ್ಲಿಯ ಮುಸಲ್ಮಾನ ಸ್ತ್ರೀಯರನ್ನು ಬಂಧಿಸಿದರು. ಬಂಧಿತ ಸ್ತ್ರೀಯರನ್ನು ಕೂಡಲೇ ಬಿಡುಗಡೆ ಮಾಡಲು ಇರಾಕಿನ ಪ್ರಾಂತ್ಯಾಧಿಕಾರಿಯಾಗಿದ್ದ ಹಜ್ಜಾತ್ ದಾಹರನಿಗೆ ಪತ್ರ ಬರೆದ. ಕಡಲುಗಳ್ಳರು ತನ್ನ ಅಧೀನರಲ್ಲವೆಂದು ದಾಹರ ಉತ್ತರಿಸಿದ. ಸಿಂಧು ರಾಜ್ಯಕ್ಕೆ ದಾಳಿಯಿಡಲು ಹಜ್ಜಾಜನಿಗೆ ಹೊಸದೊಂದು ನೆವ ಸಿಕ್ಕಿತು. ಕಲೀಫನ ಅನುಮತಿ ಪಡೆದು ಅವನು ಅದರ ದಾಳಿಗೆ ತನ್ನ ಸೈನ್ಯವನ್ನಟ್ಟಿದ.

ಎರಡು ಸಲ ವ್ಯರ್ಥಪ್ರಯತ್ನ ಮಾಡಿದ ಬಳಿಕ ಮೂರನೆಯ ಬಾರಿಗೆ ತನ್ನ ಅಳಿಯ ಖ್ಯಾತ ಸೇನಾಪತಿ ಮಹಮ್ಮದ್ ಇಬ್ನ್ ಕಾಸೀಮನನ್ನು ಅಲ್ಲಿಗೆ ಕಳಿಸಿದ. ಈತ ದಾಹರನನ್ನು ಎದುರಿಸಿದಾಗ ದಾಹರನ ಸೈನ್ಯ ರಭಸದಿಂದ ಹೋರಾಡಿತು. ಚಚನಾಮಾದ ಶಬ್ದಗಳಲ್ಲಿ ಹೇಳುವುದಾದರೆ, ಕಾಫಿರರು ಒಳ್ಳೇ ನಿಕರದಿಂದ ಅರಬರ ಮೇಲೆ ಏರಿಬಂದರು. ಅವರ ರಭಸಕ್ಕೆ ಮುಸ್ಲಿಮ್ ಸೈನಿಕರು ಕಂಗೆಟ್ಟರು. ಅವರ ಸೈನ್ಯರಚನೆಯಲ್ಲ ಮುರಿದುಬಿದ್ದು ದೊಡ್ಡ ಗೊಂದಲವುಂಟಾಯಿತು. ಆದರೂ ಆಕಸ್ಮಿಕವಾಗಿ ಬಾಣವೊಂದು ನೆಟ್ಟು ದಾಹರ ಯುದ್ಧರಂಗದಲ್ಲಿ ಮಡಿದ. ಇದರಿಂದ ಅರಬರಿಗೆ ಜಯ ಲಭಿಸಿತು. ಮುಂದೆ ಮುಹಮ್ಮದ್ ಬ್ರಾಹ್ಮಣಾಬಾದ್ ಮತ್ತು ಅಲೋರಗಳನ್ನು ಕೈವಶಮಾಡಿಕೊಂಡ. ಅಲ್ಲಿಯ ಪ್ರಜೆಗಳು ಮತ್ತು ಸೈನಿಕರು ಅವನ್ನು ನಿಕರದಿಂದ ಎದುರಿಸಿದರು. ಆದರೆ ಅನೇಕ ಸಿಂಧೀಯರು ಅವನನ್ನು ಕೂಡಿಕೊಂಡದ್ದರಿಂದ ಅವನ ಮುಂದಿನ ದಾಳಿಗಳೆಲ್ಲ ಸುಲಭವೇ ಆದುವು. ಈ ರೀತಿಯಲ್ಲಿ ಅರಬರು ಸಿಂಧು ರಾಜ್ಯವನ್ನು ಆಕ್ರಮಿಸಿಕೊಂಡು ಭಾರತದಲ್ಲಿ ಮುಸಲ್ಮಾನರು ನೆಲೆಸಲು ಒಳ್ಳೆಯ ಅವಕಾಶ ಕಲ್ಪಿಸಿದರು. ಇದಿಷ್ಟು ಚಚನಾಮಾದಿಂದ ಆಯ್ದ ಚರಿತ್ರೆಯ ಅಂಶ.

ಮುಸಲ್ಮಾನರು ಮೇಲಿಂದ ಮೇಲೆ ಸಿಂಧು ರಾಜ್ಯದ ಮೆಲೆ ದಾಳಿಯಿಡಲು ಪ್ರಯತ್ನಿಸಿ ಸೋತದ್ದನ್ನೂ ಅವರಿಗೆ ಕೊನೆಗೆ ಅನಿರೀಕ್ಷಿತವಾಗಿ ಜಯ ದೊರೆತದ್ದನ್ನೂ ಅವರು ಸಿಂಧು ರಾಜ್ಯದಲ್ಲಿ ನಿರ್ದಯೆಯಿಂದ ಮಾಡಿದ ಅನೇಕ ಅತ್ಯಾಚಾರಗಳನ್ನೂ ಚಚನಾಮಾ ಗ್ರಂಥದಲ್ಲಿ ನಿಷ್ಪಕ್ಷಪಾತವಾಗಿ ಬಣ್ಣಿಸಿರುವುದು ಒಂದು ವಿಶೇಷ ಅದನ್ನು ಬರೆದವನಂಥ ಸತ್ಯನಿಷ್ಠ ಲೇಖಕರು ದುರ್ಲಭ.                       
 										(ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ